ಉದಯಸಿಂಹ (ಉದಯಸಿಂಗ್): 1529-72. ರಾಜಪುತ್ರ ಸಂಸ್ಥಾನಗಳಲ್ಲಿ ಪ್ರಖ್ಯಾತವಾಗಿದ್ದ ಮೇವಾಡದ ರಾಣಾಸಿಂಹನ ಮಗ. ಈತ ಪಟ್ಟಕ್ಕೆ ಬಂದ ಸಮಯದಲ್ಲಿ ಮೊಗಲ್ ಚಕ್ರವರ್ತಿಯಾದ ಅಕ್ಬರ್ ಮಹಾಶಯ ರಾಜಪುತ್ರ ಸಂಸ್ಥಾನಗಳನ್ನೂ ತನ್ನ ಅಧೀನಕ್ಕೊಳಪಡಿಸುವ ಕಾರ್ಯದಲ್ಲಿ ತೊಡಗಿದ್ದ. ಅಕ್ಬರನಿಂದ ಸೋತ ಮಾಳವದ ರಾಜ ಬಾಜಬಹದ್ದೂರನಿಗೆ ಉದಯಸಿಂಹ ಆಶ್ರಯ ಕೊಟ್ಟ. ಆದ್ದರಿಂದ 1567ರಲ್ಲಿ ಮೊಗಲ್ ಬಾದಷಹ ಮೇವಾಡದ ರಾಜಧಾನಿಯಾದ ಚಿತ್ತೂರಿಗೆ ಮುತ್ತಿಗೆ ಹಾಕಿದ. ಚಿತ್ತೂರು ದುರ್ಗಮವಾದ ಕೋಟೆಯಿಂದ ಕೂಡಿದ ಅಜೇಯವಾದ ಸ್ಥಳವಾಗಿತ್ತು. ಉದಯಸಿಂಹ ತನ್ನ ತಂದೆಯಂತೆ ಪರಾಕ್ರಮಿಯಲ್ಲ. ಶತ್ರುವಿನ ದಾಳಿಯನ್ನು ಎದುರಿಸುವ ಬದಲು ಮಿತಪರಿವಾರದೊಡನೆ ಪಲಾಯನ ಮಾಡಿದ. ಆದರೆ ಆತನ ಮುಖ್ಯ ದಳಪತಿಗಳಾದ ಜಯಮಲ್ಲ ಮತ್ತು ಪುತ್ತ ಎಂಬ ಯೋಧರು ಸೈನ್ಯದ ನಾಯಕತ್ವ ವಹಿಸಿ ಪ್ರಬಲ ವಿರೋಧದಿಂದ ಶತ್ರುಗಳೊಡನೆ ಹೋರಾಡಿ ಅಸು ನೀಗಿದರು. 1568ರಲ್ಲಿ ಚಿತ್ತೂರು ಅಕ್ಬರನ ವಶವಾಯಿತು. ಆದರೆ ಉದಯಸಿಂಹ ಉದಯಪುರ ಎಂಬ ಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಕ್ಬರನಿಗೆ ಶರಣಾಗದೆ ಕೆಲಕಾಲ ಆಡಳಿತ ನಡೆಸಿದ. ರಾಜಪುತ್ರ ವೀರಾಗ್ರಣಿಗಳಲ್ಲಿ ಶ್ರೇಷ್ಠನಾದ ಹಾಗೂ ಪ್ರಬಲ ಬಲಸಂಪನ್ನನಾದ ಅಕ್ಬರ್ ಚಕ್ರವರ್ತಿಗೆ ಮಣಿಯದೆ ನಿಂತ ರಾಣಾ ಪ್ರತಾಪಸಿಂಹ ಉದಯಸಿಂಹನ ಮಗ.(ಜಿ.ಆರ್.ಆರ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ